ಇವೆಲ್ಲ ನಡೆದು ನೂರಾಹದಿನೈದು ವರ್ಷ!
Posted by ಅರುಂಧತಿ | Posted in ಚಕ್ರವರ್ತಿ ಅಂಕಣ | Posted on 1:06 AM
ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಸಾಕ್ಷಾತ್ ಅಮೆರಿಕೆಯನ್ನೇ ಧರೆಗೆ ಕೆಡವಿದ್ದರು.
ಸ್ವಲ್ಪ ವಿಚಾರ ಮಾಡಿ. ಎರಡರಲ್ಲೂ ಅದೆಷ್ಟು ಅಂತರ! ರಾಕ್ಷಸೀ ವೃತ್ತಿಯಿಂದ, ಧರ್ಮಾಂಧತೆಯ ಮೂರ್ತ ರೂಪವಾಗಿದ್ದ ಲ್ಯಾಡೆನ್ ಕೆಡವಿದ್ದು ಅಮೆರಿಕೆಯ ಹೊರರೂಪದ ಎರಡು ಕಟ್ಟಡಗಳನ್ನು ಮಾತ್ರ. ಬಂದೂಕು, ಮದ್ದು ಗುಂಡುಗಳನೆಲ್ಲ ಬಳಸಿ ಲ್ಯಾಡೆನ್ ಮತ್ತವನ ಸಹಚರರು ಕಟ್ಟಡಗಳಿಗೆ ಧಕ್ಕೆ ನೀಡಿದರು, ಒಂದಷ್ಟು ಜೀವ ತೆಗೆದರು.
ಆದರೆ ಸ್ವಾಮಿ ವಿವೇಕಾನಂದರು ವೇದಿಕೆಯ ಮೇಲೆ ನಿಂತು ಬರೀ ಮಾತಿನ ತುಪಾಕಿಯಿಂದ ಅಮೆರಿಕನ್ನರ ಅಂತಃಸತ್ತ್ವವನ್ನೇ ಅಲುಗಾಡಿಸಿಬಿಟ್ಟರು. ಅಲ್ಲಿನ ಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು. ಆಧ್ಯಾತ್ಮಿಕತೆಯ ಗಂಧ ಗಾಳಿಯಿಲ್ಲದ ಭೋಗ ಭೂಮಿಯ ಜನತೆಗೆ ಮಾತಿನ ಅಮೃತ ಸಿಂಚನ ಹರಿಸಿ ಜೀವದಾನ ಮಾಡಿದರು.
ಈ ಎರಡೂ ಘಟನೆಗಳ ಪರಿಣಾಮವೂ ಸ್ವಾರಸ್ಯಕರ. ಒಂದು ಘಟನೆಯ ನಂತರ ಅಮೆರಿಕಾ ಆಫ್ಘಾನಿಸ್ತಾನಕ್ಕೆ ನುಗ್ಗಿ, ಲ್ಯಾಡೆನ್ನನ ದೇಶವನ್ನು ಸಂಪೂರ್ಣ ನಾಶಗೈದರೆ, ವಿವೇಕಾನಂದರ ಮಾತಿಗೆ ಮರುಳಾದ ಪಾಶ್ಚಾತ್ಯರನೇಕರು ಭಾರತದ ಸೇವೆಗೆ ಸಿದ್ಧರಾಗಿ ನಿಂತರು!
ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತ ಪವಾಡವೇ ಸರಿ. ಪರದೇಶಗಳ ಪರಿಚಯವೇ ಇಲ್ಲದ, ಹೊಟ್ಟೆ- ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು, ಏನು ಮಾತನಾಡುವುದೆಂಬುದರ ಅರಿವಿಲ್ಲದ, ಕೊನೆಗೆ- ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಪವಾಡವಲ್ಲದೆ ಮತ್ತೇನು?
“ನ ರತ್ನಂ ಅನ್ವಿಷ್ಯತಿ ಮೃಗ್ಯಾತೇ ಹಿ ತತ್’ (ರತ್ನ ತಾನೇ ಯಾರನ್ನೂ ಅರಸುತ್ತ ಹೋಗುವುದಿಲ್ಲ, ಅದು ಹುಡುಕಲ್ಪಡುತ್ತದೆ) ಎನ್ನುವಂತೆ ವಿವೇಕಾನಂದರ ಪ್ರಭೆ ತಾನೇತಾನಾಗಿ ಹರಡಿತು. ಇವರ ಪ್ರಭಾವಕ್ಕೆ ಸಿಕ್ಕು ಮನೆಗೆ ಆಹ್ವಾನಿಸಿದ ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ರೈಟ್ ಎರಡು ದಿನ ಇವರೊಡನೆ ಮಾತು ಕತೆಯಾಡಿ ಉದ್ಗರಿಸಿದ್ದರು- “ಅಮೆರಿಕದ ನೆಲದ ಮೇಲೆ ಕಳೆದ ನಾಲ್ಕುನೂರು ವರ್ಷಗಳಲ್ಲಿ ಇಂತಹ ಜ್ಞಾನಿ ತಿರುಗಾಡಿದ ಉಲ್ಲೇಖಗಳೇ ಇಲ್ಲ!” ಎಂದು. ಸ್ವಾಮೀಜಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಬಳಿ ಪರಿಚಯ ಪತ್ರವಿಲ್ಲ ಎಂದಾಗ ಆತ ನಕ್ಕುಬಿಟ್ಟಿದ್ದರು. “ನೀವು ಯಾರೆಂದು ಕೇಳುವುದೂ, ಸೂರ್ಯನಿಗೆ ಹೊಳೆಯಲು ಏನಧಿಕಾರ ಎಂದು ಕೇಳುವುದೂ ಒಂದೇ!!” ಎಂದಿದ್ದರು.
ಚಿಕಾಗೋ ವೇದಿಕೆಯ ಮೇಲಿಂದ ಭುವಿ ಬಿರಿಯುವಂತೆ ಮೊಳಗಿದ ವಿವೇಕಾನಂದನ ಪಾದ ಚುಂಬಿಸಲು ಅಮೆರಿಕವೇ ಸಿದ್ಧವಾಗಿ ನಿಂತಿತ್ತು. (ಕ್ರಿಶ್ಚಿಯನ್ ಪಾದ್ರಿಗಳನ್ನು ಬಿಟ್ಟು. ಏಕೆಂದರೆ, ಅವರ ಉದ್ಯೋಗಕ್ಕೇ ಈತ ಸಂಚಕಾರ ತಂದುಬಿಟ್ಟಿದ್ದ!). ವಿವೇಕಾನಂದ ಎಗ್ಗಿಲ್ಲದೆ ನುಡಿದ. ಕ್ರಿಶ್ಚಿಯನ್ನರ ನಾಡಿನಲ್ಲಿ ನಿಂತು, ನಮ್ಮ ನಾಡಿಗೆ ಬೇಕಾಗಿದ್ದುದು ಅನ್ನವೇ ಹೊರತು ಧರ್ಮವಲ್ಲವೆಂದ. ಸಾಧ್ಯವಿದ್ದರೆ ಅನ್ನ ಕೊಡಿ, ಇಲ್ಲವಾದರೆ ತೆಪ್ಪಗಿರಿ ಎಂದುಬಿಟ್ಟ. ತನ್ನ ರಾಷ್ಟ್ರದ ಬಗ್ಗೆ, ಧರ್ಮದ ಶ್ರೇಷ್ಠತೆಯ ಬಗ್ಗೆ ಆತನಿಗೆ ಹೆಮ್ಮೆಯಿತ್ತು. ಅವನು ಮಾತಾಡಿದ್ದು ಸಂಗೀತವಾಯ್ತು. ನುಡಿದಿದ್ದೆಲ್ಲ ತುಪಾಕಿಯ ಗುಂಡಾಯ್ತು. ಶ್ರೀಮತಿ ಅನಿಬೆಸೆಂತರು ಹೇಳಿದರು; “ಆತ ಸಂನ್ಯಾಸಿಯಲ್ಲ, ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡುವ ಯೋಧ”. ಅಮೆರಿಕದ ಪತ್ರಿಕೆ ಬರೆಯಿತು;“ಇವನಂತಹ ಬುದ್ಧಿವಂತರಿರುವ ನಾಡಿಗೆ ಮಿಷನರಿಗಳನ್ನು ಕಳಿಸುವುದೇ ಮೂರ್ಖತನ. ಭರತದಿಂದ ಇವನಂತಹ ಮಿಷನರಿಗಳನ್ನು ನಾವು ಕರೆಸಿಕೊಳ್ಳಬೇಕಷ್ಟೆ!”
ಗುಲಾಮರ ನಾಡಿನಿಂದ ಹೊರಟಿದ್ದವ ಚಕ್ರವರ್ತಿಯಾಗಿಬಿಟ್ಟಿದ್ದ. ತನ್ನ ಹೃದಯ ತುಂಬಿದ್ದ ಪ್ರೇಮದ ಸುಧೆಯಿಂದ ಎಲ್ಲರನ್ನೂ ತೋಯಿಸಿಬಿಟ್ಟಿದ್ದ. ಜರ್ಮನಿಯ ಥಾಮಸ್ ಕುಕ್ ಹೇಳಿದ್ದರು; “ಅದೊಮ್ಮೆ ಅವರ ಕೈಕುಲುಕಿ ಮೂರು ದಿನ ಕೈ ತೊಳೆದುಕೊಂಡಿರಲಿಲ್ಲ. ಆವರ ಪ್ರೇಮದ ಸ್ಪರ್ಷ ಆರದಿರಲೆಂದು!”
ರಕ್ ಫೆಲ್ಲರನಂತಹ ಸಿರಿವಂತರು ಅವನಡಿಗೆ ಬಿದ್ದರು. ಪಾದಗಳಿಗೆ ಅರ್ಪಿತವಾದ ಕುಸುಮವಾದರು. ವಿವೇಕಾನಂದರು ಗರ್ವದಿಂದ ಬೀಗಲಿಲ್ಲ. ಬದಲಿಗೆ ತಾಯಿ ಭಾರತಿಯೆಡೆಗೆ ಮತ್ತಷ್ಟು ಬಾಗಿದ. ನಿಮ್ಮ ಸೇವೆ ಮಾಡಬೇಕೆಂಬ ಮನಸಿದೆ. ಏನು ಮಾಡಲಿ?” ಎಂದು ಕೇಳಿದವರಿಗೆ, “ನನ್ನ ಸೇವೆ ಮಾಡಬೇಕೆಂದರೆ ಭಾರತವನ್ನು ಪ್ರೀತಿಸಿ” ಎಂದ. ಸಿದ್ಧರಾದವರನ್ನು ಕರೆತಂದ. ಹಗಲಿರುಳು ಭಾರತದ ಏಳ್ಗೆಯ ಕುರಿತು ಚಿಂತಿಸಿದ. ಅಮೆರಿಕದ ಬೀದಿಬೀದಿಗಳಲ್ಲಿ ತನ್ನ ಆಳೆತ್ತರದ ಕಟೌಟು ರಾರಾಜಿಸುತ್ತಿದ್ದರೂ ತಾನು ಸರಳವಾಗೇ ಉಳಿದ. ಭಾರತಕ್ಕೆ ಮರಳಿದ. ಭಾರತದ ಜಪ ಮಾಡುತ್ತಲೇ ದೇಹ ತ್ಯಾಗ ಮಾಡಿದ.
ಹಾಗೆ ದೇಹ ಬಿಟ್ಟ ವಿವೇಕಾನಂದರಿಗೆ ಕೇವಲ ಮೂವತ್ತೊಂಭತ್ತು ವರ್ಷ.
ಸ್ವಾಮೀ ವಿವೇಕಾನಂದರು ಚಿಕಾಗೋ ಭಾಷಣ ಮಾಡಿ ಸೆಪ್ಟೆಂಬರ್ ಹನ್ನೊಂದಕ್ಕೆ ನೂರಾ ಹದಿನೈದು ವರ್ಷಗಳಾದವು. ಅದಕ್ಕೇ ಇವೆಲ್ಲ ನೆನಪಾಯ್ತು. ಅಷ್ಟೇ.
No comments:
Post a Comment