Wednesday, October 26, 2016

ಇಹಕೆ ಬಂದಿಳಿದೊಡನೆ ನಿನ್ನ ದಿಟ್ಟಿ ಹಿಂದಿರುಗಿ ಹೋಗುವೆಡೆಗೆ  ನೆಟ್ಟಿರುವೆ..
ಯಾಕಿಂಥ ಧಾವಂತ???
ಮನ್ವಂತರಗಳ ಬಳಿಕವೂ ಇಲ್ಲಿರಲಾಗದೆ ಅಲ್ಲಿಗೆ ಹೋಗಲಾಗದೆ ಜೋತು ಬಿದ್ದಿರುವೆ..
ಅಲ್ಲೇನ ಇಟ್ಟಿರುವೆ??
ಇಲ್ಲಿರುವವರೆಗೆ ಇರು ನೀ ಜೀವಂತ
ಬದುಕಿರುವೆನೆಂಬ ಭ್ರಮೆಯ ಬಿಡು
ಮರಣಿಸುವೆನೆಂಬ ಭಯವ ಬಿಡು
ನೀನು ಅಂದೂ ಇದ್ದಿ
ಇಂದೂ ಇರುವಿ
ಮುಂದೆಯೂ ನಿನ್ನಿರವು ನಿಶ್ಚಿತ
ನಿನ್ನೊಡನೆ ನೀನಿರೆ ನೀನೆಂದೂ ಒಂಟಿಯಲ್ಲ
ನಿನ್ನೊಳಗೆ ನೀನಿಳಿದಾಗ ಎಂದು ಒಬ್ಬಂಟಿಯಲ್ಲ..
ಒಂಟಿತನ ಕಾಡುವುದು ನಿನ್ನ ನೀ ತೊರೆದಾಗ
ಇನ್ನಾರೋ ಆಗಬೇಕೆಂದು ಹಾತೊರೆದಾಗ..
ನೀನು ನೀನಾಗಿರಲು ಎಲ್ಲರಿಗಿಂತ ಉತ್ತಮನು
ನೀನೇ ಎಲ್ಲವು ಅದಂದು ಸರ್ವೋತ್ತಮನು..
ನಾನೆಂಬುದಿರೆ ನೀ ಅಧಮನು
ನಾನೇ ಎಲ್ಲಾ ಅದಂದು ನಾರಾಧಮನು..
ಮುಕುತಿಯನು ಈವನು ಶಕುತಿಯನು ಈವನು
ಭಕುತಿಯ ನೀನಿಟ್ಟೊಡೇ ಗುರುವಿನಲಿ..
ಅದುವೇ ಬದುಕಿನಾ ದಾರಿ.. ಅರಿವಿರಲಿ..
ಗುರುವಿರಲಿ.. ಗುರುವಿನಾ 
ಅಂತೆ ಕಂತೆಯೆಂಬ ದನಗಳಾ ಕೊರಳಿಗೆ 
ಚಿಂತೆಯೆಂಬ ನೊಗವನ್ನು ಕಟ್ಟಿ 
ಇಳೆಯ ಉತ್ತಿ ಬಿತ್ತಿದರೆ ದುಃಖದ ಕಳೆಯಲ್ಲದೆ 
ಸುಖದ ಬೆಳೆ ಬಂದೀತೇ ಗೆಳೆಯ???
ಚಿಂತೆ ಬಿಡು. ಹೊತ್ತ ಕಂತೆ ಬಿಡು. 
ಅಂತೆಕಂತೆಗಳ ಸುಡು. 
ಸಂತೆಯಲಿ ಸಂತನಿಗೆ ಬೆಲೆಯಿಲ್ಲ,
ಬೆಲೆಯಿಲ್ಲದೆಡೆ ನಿನ್ನ ನೆಲೆಯಲ್ಲ. 
ಅತುಮದಾ ಸೆಳೆಯಿಹುದಲ್ಲಿ, ಅದರೆಡೆಗೆ ನಡೆ...