Thursday, September 18, 2008

ಆರೋಗ್ಯ

ಆರೋಗ್ಯವೆಂಬುದು ಭಾಗ್ಯಕ್ಕಿಂತ ಮಿಗಿಲಾದುದು. ಆರೋಗ್ಯವಿದ್ದರೆ ಭಾಗ್ಯವಿದ್ದ ಹಾಗೆ ಎಂದು ಭಾವಿಸುವವರೆಷ್ಟೋ ಮಂದಿ. ಇಲ್ಲಿ ಕೆಲವು ಸರಳ ಸಲಹೆಗಳೊಂದಿಗೆ ನನ್ನ ಆರೋಗ್ಯದ ಬಗೆಗಿನ ತಿಳುವಳಿಕೆಗಳನ್ನು ವಿಶದಪಡಿಸುತ್ತ ಹೋಗುತ್ತೇನೆ.

ನಮ್ಮಲ್ಲಿ ಹಲವರಿಗೆ ಒಂದು ಅಭ್ಯಾಸವಿದೆ. ಅದೇನೆಂದರೆ ಒಂದು ಸಣ್ಣ ಜ್ವರಕ್ಕೂ ವೈದ್ಯರಲ್ಲಿಗೆ ಓಡುತ್ತಾರೆ. ವೈದ್ಯರು ಬರೆದುಕೊಟ್ಟ ಮಾತ್ರೆಗಳನ್ನು ಕುಡಿಯುತ್ತಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಕೆಲವು ಮಾತ್ರೆಗಳನ್ನು ಕೊಂಡು ಸೇವಿಸುತ್ತಾರೆ. ಸ್ವತಹ ವೈದ್ಯರಾಗುವವರೂ ಇದ್ದಾರೆ. ಅವರು ಇತರರಿಗೂ ಸಲಹೆಗಳನ್ನು ಕೊಡುತ್ತಾರೆ. ಜ್ವರ ಬರುತ್ತಿದೆ ಎಂದು ತಿಳಿದಾಕ್ಷಣ ಪ್ಯಾರಸೆಟಮೊಲ್ ನುಂಗುತ್ತಾರೆ.

ಆದರೆ ಈ ಮಾತ್ರೆಗಳು, ಚುಚ್ಚು ಮದ್ದು ಮಾತ್ರವೇನ ಆರೋಗ್ಯಕ್ಕೆ ಪರಿಹಾರ? ಇಲ್ಲ... ನಮ್ಮ ಪ್ರಾಚೀನ ಗ್ರಂಥಗಳ ಪ್ರಕಾರ ಹಲವಾರು ಸುಲಭ ಮಾರ್ಗಗಳಿವೆ. ಆದರೆ ನಮ್ಮ ಒಂದು ವರ್ಗ ಅವುಗಳನ್ನು ರಹಸ್ಯವಾಗಿಟ್ಟಿದೆ. ಎಲ್ಲಿಯೂ ಬಹಿರಂಗಪಡಿಸಿಲ್ಲ. ಸ್ವಾರ್ಥ ಸಾಧನೆಯೇ ಇದರ ಉದ್ದೇಶ. ಇಲ್ಲಿ ನಾನು ಹಲವು ಹಳೆಯ ಗ್ರಂಥಗಳಿಂದ ಆಯ್ದ ಕೆಲವು ವಿಚಾರಗಳನ್ನ ನಿಮ್ಮ ಮುಂದಿಡುತ್ತಿದ್ದೇನೆ.

ಉಸಿರಾಟ...

ಈ ಬಗ್ಗೆ ನಿಮಗೆಷ್ಟು ಗೊತ್ತು? ಉಸಿರಾಟವೊಂದರಿಂದಲೇ ನಾವು ಹಲವು ಬಗೆಯ ಸಮಸ್ಯೆಗಳಿಂದ ಪಾರಾಗಬಹುದೆಂಬ ಸತ್ಯ ನಿಮಗೆ ಗೊತ್ತೇ? ಇಲ್ಲದಿದ್ದರೆ ಇಲ್ಲಿದೆ ನೋಡಿ ಆ ರಹಸ್ಯದ ಅನಾವರಣ. ಸಾಧಾರಣವಾಗಿ ನಾವು ನಿಮಿಷಕ್ಕೆ ೧೫ ಬಾರಿ ಉಸಿರಾಡುತ್ತೇವೆ. ಅದು ಸಾಮಾನ್ಯವಾಗಿ ನಡೆಸುವ ಉಸಿರಾಟ. ಹೀಗೆ ಉಸಿರಾಡಿ ನಾವು ೬0-೭೦ ವರ್ಷ ಬದುಕಬಲ್ಲೆವಾದರೆ, ಇನ್ನು ಧೀರ್ಘ ಉಸಿರಾಟ ನಡೆಸಿದರೆ? ಖಂಡಿತ ೧೦೦ ಕ್ಕೂ ಹೆಚ್ಚು ವರ್ಷ ಬದುಕಬಲ್ಲೆವು.

ಹಿಂದೆ ತ್ರೆತ, ದ್ವಾಪರ ಯುಗಗಳಲ್ಲಿ ಜನ ೧೦೦೦ ವರ್ಷ, ೫೦೦ ವರ್ಷ ಬದುಕಿದ ಉದಾಹರಣೆಯಿದೆ. ಹೇಗೆ ಸಾಧ್ಯ ಎನ್ನುವಿರಾ? ಸಾಧ್ಯವಿದೆ. ಧೀರ್ಘ ಉಸಿರಾಟದ ಮೂಲಕ. ಆಮೆ ನಿಮಿಷಕ್ಕೊಂದು ಬಾರಿ ಮಾತ್ರ ಉಸಿರಾಡುತ್ತದೆ. ಆದರೆ ಅದು ೩೦೦ ವರ್ಷ ಬದುಕುತ್ತದೆ. ನಾಯಿ ನಿಮಿಷಕ್ಕೆ ೧೦೦ ಬಾರಿ ಉಸಿರಾಡುತ್ತದೆ. ಅದಕ್ಕೇ ೧೫ ವರ್ಷಕ್ಕಿಂಥಾ ಹೆಚ್ಚಿಗೆ ಬದುಕಲಾರದು. ಒಮ್ಮೆ ಒಂದು ನಿಡಿದಾದ ಶ್ವಾಸ ಎಳೆದುಕೊಳ್ಳಿ. ಹೇಗೆಂದರೆ ನಿಮ್ಮ ಉಸಿರ ತಿತ್ತಿಯಲ್ಲಿ ತುಂಬಿಕೊಂಡ ಗಾಳಿ ನಿಮ್ಮ ಕಾಲ ಹೆಬ್ಬೆರಳಿಗೂ ತಲುಪುವ ಹಾಗೆ.

ಪ್ರತಿ ಉಸಿರಾಟ ಲಯಬದ್ಧವಾಗಿರಲಿ. ನಿಧಾನಕ್ಕೆ ನಿಮ್ಮ ದೇಹದ ಪ್ರತೀ ಅಂಗಗಳನ್ನೂ ನೆನೆಸಿಕೊಂಡು ಉಸಿರೆಳೆದುಕೊಳ್ಳುತ್ತಾ ಹೋಗಿ. ಉಸಿರು ನಿಮ್ಮ ಶ್ವಾಸಕೋಶ ತಲುಪಿದರಷ್ಟೇ ಸಾಲದು. ಅದು ದೇಹದ ಉಳಿದೆಲ್ಲ ಅಂಗಗಳಿಗೂ ತಲುಪಬೇಕು. ಆಗ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ನಿಮ್ಮ ಆರೋಗ್ಯವೂ ವೃದ್ಧಿಸುತ್ತದೆ. ನೀವು ಧೀರ್ಘವಾಗಿ ಎಳೆದುಕೊಳ್ಳುವ ಉಸಿರಿನಲ್ಲಿ ಅಷ್ಟು ಶಕ್ತಿ ಇರುತ್ತದೆ. ಆ ಶಕ್ತಿ ನಿಮ್ಮ ದೇಹವನ್ನೆಲ್ಲಾ ವ್ಯಾಪಿಸುತ್ತದೆ. ನಿಮ್ಮ ದೇಹಕ್ಕೆ ಚೈತನ್ಯ ತಂದುಕೊಡುತ್ತದೆ.

ಹಣ

ಹಣ...

ಬಡವರ ಜಗತ್ತು ಪದ ಕಿವಿಗೆ ಬಿದ್ದೊಡನೆ ಬೆಚ್ಚಿ ಬೀಳುತ್ತದೆ. ಚಡಪಡಿಸುತ್ತದೆ. ಹಣ ಸಂಪಾದಿಸಲು ಶತ ಪ್ರಯತ್ನಗಳನ್ನು ಮಾಡುತ್ತದೆ. ಆದರೆ ಸೋತು ಕೈ ಚೆಲ್ಲುತ್ತದೆ. ಹಣ ನಮಗೆ ಆಗಿ ಬರೋಲ್ಲ, ಅದೇನಿದ್ದರೂ ಬಲ್ಲಿದರ, ಎಂದಿದ್ದರೂ ಶ್ರೀಮಂತರ ಸೊತ್ತು ಎಂದು ನಿರ್ಧರಿಸಿಬಿಡುತ್ತದೆ.. ಅವರ ಹಣದ ಬಗೆಗಿನ ಭಾವನೆಗಳು ಬೇರೆಯದೇ ತೆರನಾಗಿರುತ್ತವೆ. ಹಣಕ್ಕೂ ಮನಸಿಗೂ ಯಾವ ನಂಟು ಎಂದಿರಾ? ಇದೆ. ಹಣಕ್ಕೂ ಮನಸಿಗೂ ನಂಟು ಇದೆ. ಹಣವನ್ನು ಹೇಗಾದರೂ ಸಂಪಾದಿಸಬೇಕೆಂಬ ಮನಸಿನ ಆಲೋಚನೆಯೇ ಇಲ್ಲಿ ಪ್ರಸ್ತುತ.

ಯಾಕೆ ಹೀಗೆ?

ಅದಕ್ಕೆ ಕಾರಣವಿದೆ. ಗಮನಿಸಿ. ನಾವು ಚಿಕ್ಕವರಿದ್ದಾಗಿಂದಲೂ ಹಣದ ಪ್ರಸ್ತಾಪವಾದಾಗಲೆಲ್ಲ ಅದರ ಕೊರತೆಯ ಬಗ್ಗೆಯೇ ಚರ್ಚಿಸಿರುತ್ತೇವೆ. ದುಡ್ಡು ಎಂದಾಗ ಮನೆಯಲ್ಲಿ ಎಲ್ಲರ ಮುಖಚಹರೆಯೇ ಬದಲಾಗಿಬಿಡುತ್ತದೆ. ದುಡ್ಡು ಮರದ ಮೇಲೆ ಬೆಳೆಯುತ್ತಾ? ದುಡ್ಡು ಯಾರತ್ರ ಇದೆ? ಹೇಗೋ ಹೊಂದಿಕೊಂಡು ಹೋಗು... ಹೀಗೆ ನಾನಾ ಕಾರಣ ಕೊಟ್ಟು ಹಣದ ಕೊರತೆಯನ್ನೇ ದೊಡ್ಡದು ಮಾಡುತ್ತಾರೆ. ಅಲ್ಲಿಗೆ ಮುಗಿಯಿತು. ನಾವು ಬೆಳೆದು ದೊಡ್ಡವರಾದ ಮೇಲೂ ಹಣದ ಆಲೋಚನೆ ಮಾಡಿದಾಗಲೆಲ್ಲ ಅದರ ಕೊರತೆಯ ಬಗ್ಗೆಯೇ ಯೋಚನೆ ಮಾಡಿರುತ್ತೇವೆ. ಅಂದರೆ ನಮಗಾರಿಗೂ ಹಣದ ವಿಪುಲತೆಯ ಆಲೋಚನೆ ಮಾಡಲಾಗುವುದೇ ಇಲ್ಲ. ಏಕೆಂದರೆ ಮನೆಯಲ್ಲಿ ಅಂತಹ ವಾತಾವರಣ ಏರ್ಪಡುವುದೇ ಇಲ್ಲ.

ಆದರೆ ಬಲ್ಲಿದರ, ಶ್ರೀಮಂತರ ಮನೆಗಳಲ್ಲಿ ಹಾಗಲ್ಲ. ಅಲ್ಲಿ ಹಣದ ವಿಪುಲತೆಯ ಬಗ್ಗೆ ಚರ್ಚೆಯಾಗುತ್ತದೆ. "ಚೆನ್ನಾಗಿ ಓದು, ಒಳ್ಳೇ ಕಂಪನಿಯಲ್ಲಿ ಕೆಲಸ ಸಿಗುತ್ತೆ." ಅಂತಾನೆ ಬಡ ಅಪ್ಪ. ಆದರೆ ಶ್ರೀಮಂತ ಅಪ್ಪ 'ಚೆನ್ನಾಗಿ ಓದೋ, ಒಳ್ಳೇ ಕಂಪನಿಯನ್ನು ಕೊಂಡುಕೋಬಹುದು". ಅಂತಾನೆ. ಅಂದರೆ ನಮ್ಮ ಆಲೋಚನೆಯೇ ನಮ್ಮ ಬಡತನಕ್ಕೆ ಕಾರಣವೇ? ಅಕ್ಷರಶಃ ಹೌದು!

ಬಡವನಾರ್? ಮಡದಿಯೊಲವಿನ ಸವಿಯನರಿಯದವನ್,
ಚಿಣ್ಣರಾಟದಿ ಬೆರೆತು ನಗಲರಿಯದವನ್,
ಉಡುರಾಜನೋಲಗದಿ ಕುಳಿತು ಮೈಮರೆಯದವನ್,
ಬಡಮನಸೆ ಬಡತನವೋ ಮರುಳ ಮುನಿಯ

ಎಂದು ಡಿವಿಜಿಯವರು ಸೊಗಸಾಗಿ ತಮ್ಮ ಮರುಳ ಮುನಿಯನ ಕಗ್ಗದಲ್ಲಿ ಬರೆಯುತ್ತಾರೆ. ಮನಸಿನ ಆಲೋಚನೆಗಳು ಬಡವಾದರೆ ಬದುಕಿಗೂ ಬಡತನ ಖಂಡಿತ. ನಿಮ್ಮ ಆಲೋಚನೆಗಳನ್ನು ವಿಸ್ತಾರಗೊಳಿಸಿ. ಬೃಹತ್ತಾಗಿಸಿ. ಆಲೋಚಿಸಿ... ಶ್ರೀಮಂತರಾಗಿ... ಹೇಗೆ? ನೆಪೋಲಿಯನ್ ಹಿಲ್ ಬರೆದ "ಥಿಂಕ್ ಅಂಡ್ ಗ್ರೋ ರಿಚ್" ಓದಿ. ಅದು ಕನ್ನಡದಲ್ಲೂ ಅನುವಾದಿತವಾಗಿದೆ.

ಒಂದು ಉಪಾಯ ಹೇಳಲಾ?

ನಿಮ್ಮ ಕಿಸೆಯಲ್ಲೋ ಹಣದ ಥೈಲಿಯಲ್ಲೋ ರೂ. ೫೦೦/- ಗರಿಗರಿ ನೋಟು ಇಟ್ಟುಕೊಳ್ಳಿ. ಅದನ್ನು ಖರ್ಚು ಮಾಡದಿರಲು ನಿರ್ಧರಿಸಿ. ಪೇಟೆಯಲ್ಲಿ ಮುಂದೆ ಸಾಗುತಾ ಸಾಗುತ್ತಾ ಕಣ್ಣಿಗೆ ಬೀಳುವ ಇಷ್ಟದ ವಸ್ತುಗಳ ಮೇಲೆ ಕಣ್ಣು ಹಾಯಿಸಿ. ನನ್ನಲ್ಲಿ ಹಣವಿದೆ, ಇದನ್ನು ಕೊಂಡು ಕೊಳ್ಳಬಹುದು ಎಂದುಕೊಳ್ಳಿ.
ಕೊಂಡುಕೊಳ್ಳಬೇಡಿ. ಹಾಗಂದುಕೊಳ್ಳಿ ಅಷ್ಟೇ. ಹೀಗೆ ಕಣ್ಣಿಗೆ ಬಿದ್ದ ಇಷ್ಟ ಪಟ್ಟ ವಸ್ತುಗಳನ್ನು ಮನಸಿನಲ್ಲಿಯೇ "ನನ್ನ ಬಳಿ ಹಣವಿದೆ. ಇದನ್ನು ಕೊಳ್ಳಬಹುದು." ಎಂದುಕೊಳ್ಳುತ್ತಾ ಹೋಗಿ.
ಪ್ರತಿ ಬಾರಿ ಹಾಗಂದುಕೊಳ್ಳುತ್ತಲೇ ಥೈಲಿಯಲ್ಲಿರುವ ಹಣದ ಬಗ್ಗೆ ಗಮನವಿಡಿ. ನಿಮ್ಮಲ್ಲಿ ಹಣವಿದ್ದಾಗ ಒಂದು ರೀತಿಯ ಭದ್ರತಾ ಭಾವನೆ ಇರುತ್ತದೆ. ಭಾವನೆಯನ್ನು ಉಳಿಸಿಕೊಳ್ಳಿ.

ದಿನಕ್ಕೆ
ಹಾಗೆ ಸುಮಾರು ೧೫ ಸಾವಿರ ರೂಪಾಯಿಗಳಷ್ಟು ಮಾನಸಿಕ ಖರೀದಿ ನಡೆಸಿ. ಹೀಗೇ ಕೆಲ ದಿನ ಮಾಡಿ. ಆಗ ನೋಡಿ. ನಿಮ್ಮ ಕೊರತೆಯೆಂಬ ಮನಸ್ತತ್ವ ಮಾಯವಾಗಿ ಜಾಗಕ್ಕೆ ವಿಪುಲತೆ ಬಂದು ಕೂಡುತ್ತದೆ. ಏಕೆಂದರೆ ನೀವು ಪ್ರತಿ ಬಾರಿ ಹಣವಿದೆ, ನನ್ನಲ್ಲಿ ಹಣವಿದೆ ಎಂದು ಅಂದುಕೊಂಡಾಗ ಅದು
ಸುಪ್ತ ಮನಸಿನಲ್ಲಿ ಅಚ್ಚಾಗಿ ನಿಲ್ಲುತ್ತದೆ. ಯಥಾ ಪ್ರಕಾರ ಸುಪ್ತ ಮನಸು ವಿಷಯವನ್ನು ಉನ್ನತ ಮನಸಿಗೆ ರವಾನಿಸುತ್ತದೆ. ಉನ್ನತ ಮನಸು ಅದಕ್ಕೆ ಬೇಕಾದ ಏರ್ಪಾಟು ಮಾಡುತ್ತದೆ.

ನಿಮಗೆ ಅರಿವಿಲ್ಲದ ಹಾಗೆ ಎಲ್ಲೆಲ್ಲಿಂದಲೋ ಹಣ ಒದಗಿ ಬರುತ್ತದೆ. ಆಶ್ಚರ್ಯವಾಗುವ ರೀತಿಯಲ್ಲಿ ಬರುತ್ತದೆ. ನಿಮ್ಮ ಬಳಿಗೆ ಅಪಾರ ಹಣ ಬೇರೆ ಬೇರೆ ರೀತಿಯಲ್ಲಿ ಬಂದು ತಲುಪುತ್ತದೆ. ಬೇಕಾದರೆ ಪರೀಕ್ಷಿಸಿ ನೋಡಿ.

ಆಕರ್ಷಣೆಯ ನಿಯಮ

ಆಕರ್ಷಣೆ...

ಏನಿದು? ಮನಸಿನ ಬಗ್ಗೆ ಬರೆಯುವುದು ಬಿಟ್ಟು ಈ ಶೀರ್ಷಿಕೆ ಯಾಕೆ ಎಂದಿರಾ? ಈ ಮನಸಿಗೂ ಆಕರ್ಷಣೆಗೂ ಎಲ್ಲಿಲ್ಲದ ನಂಟು... ಹೇಗೆ? ವಿವರಿಸುತ್ತಾ ಹೋಗುತ್ತೇನೆ... ಮನಸು... ಎಲ್ಲಿದೆ? ಈ ಭೌತ ಶರೀರದಲ್ಲಿ ಎಲ್ಲಿ ಕಾಣಸಿಗುತ್ತದೆ? ಎಲ್ಲಿಯೂ ಇಲ್ಲ...
ಹಾಗಾದರೆ ನಮ್ಮನ್ನೆಲ್ಲ ಹಿಂಡಿ ಹಿಪ್ಪೆ ಮಾಡುವ ಈ ಮನಸು ನಮ್ಮೊಳಗಿಲ್ಲ... ಅಂದರೆ ಮತ್ತೆಲ್ಲಿದೆ?
ವಿಜ್ಞಾನಿಗಳ ಪ್ರಕಾರ ಅದು ನಾವೆಲ್ಲಿ ನೋಡುತ್ತಿರುವೆವೋ ಏನನ್ನು ನೋಡುತ್ತಿರುವೆವೋ ಅಲ್ಲಿದೆ. ತಮಾಷೆ ನೋಡಿ...
ನಮ್ಮೊಳಗಿಲ್ಲದ ಒಂದು ನಮ್ಮೊಳಗನ್ನು ಮತ್ತು ನಮ್ಮ ಹೊರಗನ್ನು ಹೇಗೆ ಅಧ್ವಾನ ಮಾಡಬಲ್ಲುದು ಹಾಗೂ ಪ್ರಧಾನ ಮಾಡಬಲ್ಲುದು...


ವಿಪರ್ಯಾಸವೆಂದರೆ... ನಾವು ಮನಸಿನಲ್ಲಿ ಆಲೋಚಿಸಿದ್ದೆಲ್ಲಾ ನಮ್ಮದಲ್ಲವೇ ಅಲ್ಲ... ಅದು ಹೊರಗಿನದ್ದು...
ಅಧ್ಯಾತ್ಮಿಕವಾಗಿ ವಿವರಿಸುವುದಾದರೆ... ನಮ್ಮ ಭೌತ ಶರೀರಕ್ಕೆ ಒಂದು ಹೊರಮೈ ಇದೆ. ಅದೇ ಆಕಾಶ ಶರೀರ... ದೇಹದ ಸುತ್ತಲು ಒಂದು ಬೆಳಕಿನ ರೇಖೆ ಹೊಮ್ಮಿದ ಹಾಗೆ... ಈ ಆಕಾಶ ಶರೀರಕ್ಕೆ ಬಂದು ಈ ಆಲೋಚನೆಗಳು ತಾಕುತ್ತವೆ...
ತಾಕಿದ್ದು ಮನಸಿಗೆ ತಿಳಿಯುತ್ತದೆ... ಮನಸು ಆಲೋಚನೆಗೊಳಗಾಗುತ್ತದೆ... ನಮಗೆ ತಿಳಿಯುವುದೇ ಇಲ್ಲ... ಅಷ್ಟು ದುರ್ಬಲರು ನಾವು...

ಸಿನೆಮಾ.. ಎಂದು ಆಲೋಚನೆ ಮೂಡಿದ ಕೂಡಲೇ ಉಳಿದೆಲ್ಲ ನಮ್ಮ ಕಣ್ಣ ಮುಂದೆ ಸುಳಿಯತೊಡಗುತ್ತವೆ...
ಯಾವ ಚಿತ್ರ? ಯಾವ ಚಿತ್ರಮಂದಿರ? ಯಾವ ಪ್ರದರ್ಶನ? ಎಷ್ಟು ಜನ ಹೋಗುವುದು? ಎಷ್ಟು ಗಂಟೆಗೆ ಹೊರಡುವುದು? ನಡುವೆ ಏನು ತಿನ್ನುವುದು? ಎಲ್ಲಿ ತಿನ್ನುವುದು?
ಟಿಕೇಟು ಸಿಗದಿದ್ದರೆ ಏನು ಮಾಡುವುದು?
ಹುಡುಗ ಹುಡುಗಿ ಇಬ್ಬರೇ ಆದರೆ ಯಾವ ಸಾಲು... ಯಾವ ಸಾಲು ಸುರಕ್ಷಿತ?
ಹೀಗೆ... ಒಂದು ಆಲೋಚನೆಗೆ ನೂರು ಆಯಾಮಗಳು ದೊರಕುತ್ತವೆ...


ಇರಲಿ... ಈಗ ಆಕರ್ಷಣೆಯ ವಿಚಾರ ಮಾಡೋಣ. ಜಗತ್ತಿನಲ್ಲಿ ಒಂದು ನಿಯಮವಿದೆ.
ಜಗತ್ತು ಆ ನಿಯಮದ ಪ್ರಕಾರವೇ ನಡೆಯುತ್ತದೆ. ಇನಿತೂ ತಪ್ಪುವುದಿಲ್ಲ...
ಅದುವೇ ಆಕರ್ಷಣೆಯ ನಿಯಮ. ಇಂದು ನೀವು ಒಂದು ವಾಹನ ಕೊಂಡುಕೊಳ್ಳಬೇಕು ಎಂದುಕೊಂಡಿರಿ.
ಮರುದಿನವೋ, ಮರುವಾರವೋ, ಮರು ತಿಂಗಳೋ, ಮರುವರ್ಷವೋ ನಿಮ್ಮ ಅನಿಸಿಕೆಯನ್ನು ನಿಜ ಮಾಡಿದಿರಿ.

ಅಂದರೆ... ನೀವು ಅಂದುಕೊಳ್ಳುವುದಕ್ಕೂ ಅಂದುಕೊಂಡಿದ್ದು ನಿಜವಾಗುವುದಕ್ಕೂ ನಡುವೆ ಏನೇನು ಮಾಡಿದಿರಿ?
ಬಹಳಷ್ಟು ಜನಕ್ಕೆ ನೆನಪಿರುವುದಿಲ್ಲ. ಅವರು ಅಂದುಕೊಂಡ ಸಮಯದಿಂದ ಕೊಂಡುಕೊಳ್ಳುವ ಸಮಯದವರೆವಿಗೂ
ಅದರ ಬಗ್ಗೆಯೇ ಕನಸು ಕಾಣುತ್ತಿರುತ್ತಾರೆ.
ಕಲ್ಪನೆ ಮಾಡಿಕೊಳ್ಳುತ್ತಾರೆ. ಅವರಿಗೇ ತಿಳಿಯದ ಹಾಗೆ ಅವರ ಅನಿಸಿಕೆಗೆ, ಕನಸಿಗೆ, ಕಲ್ಪನೆಗೆ ಜೀವ ತುಂಬುತ್ತಾರೆ.
ಅದನ್ನೊಂದು ನಂಬಿಕೆಯಾಗಿ ಪರಿವರ್ತಿಸುತ್ತಾರೆ.
ಅದನ್ನೊಂದು ಶಕ್ತಿಯಾಗಿ ಬದಲಾಯಿಸುತ್ತಾರೆ. ಅಷ್ಟು ಸಾಕು. ಅವರ ಅನಿಸಿಕೆ ನಿಜವಾಗಲು.

ಅವರ ಅನಿಸಿಕೆ ವಿಶ್ವದ ಅಂತಹುದೆ ಅನಿಸಿಕೆಗಳೊಂದಿಗೆ ಬೆರೆಯುತ್ತದೆ.
ಅದೊಂದು ಕಂಪನವಾಗಿ ಮಾರ್ಪಡುತ್ತದೆ.
ಆ ಕಂಪನವು ತನ್ಮೂಲಕ ಅದಕ್ಕೆ ಸಂಬಂಧಿಸಿದ ಹಾಗೆ
ವ್ಯಕ್ತಿಗಳನ್ನು, ಸನ್ನಿವೇಶವನ್ನು, ಪರಿಸ್ಥಿತಿಯನ್ನು ಉಂಟುಮಾಡುತ್ತದೆ.
ಹೀಗೆ ಯಾರೋ ನಿಮ್ಮ ಸಹಾಯಕ್ಕೆ ಬರುತ್ತಾರೆ. ಬ್ಯಾಂಕು ಸಾಲ ಕೊಡುತ್ತದೆ.
ನಿಮಗೆ ಎಲ್ಲಿಂದಲೋ ಹೇಗೋ ಹಣ ಒದಗಿ ಬರುತ್ತದೆ.

ಇದನ್ನೇ "ಆಕರ್ಷಣೆಯ ನಿಯಮ" ಎನ್ನುತ್ತಾರೆ.

ಕನಸು

ಹೌದು... ಕನಸಿಗು ಮನಸಿಗೂ ಒಂದು ನಂಟು ಇದೆ. ಮನಸಿನಲ್ಲಿ ಬಯಸಿದ್ದು ಕನಸಾಗಿ ಕಾಡುತ್ತದೆ. ಹೇಗೆ? ಪ್ರಶ್ನೆಯಿರುವುದೇ ಅಲ್ಲಿ. ನಮ್ಮ ಪ್ರತಿ ಆಲೋಚನೆಗಳನ್ನೂ ನಮ್ಮ ಸುಪ್ತ ಮನಸು(ಮುಂದೆ ವಿವರಿಸುತ್ತೇನೆ) ಒಂದು ಕಡೆ ಕೂಡಿಡುತ್ತದೆ. ಹೀಗೆ ಕೂಡಿಕೊಂಡ ಎಲ್ಲ ಆಲೋಚನೆಗಳನ್ನೂ
ಸೇರಿಸಿ ಒಂದು ಕಾರ್ಯಕ್ರಮವಾಗಿ ರೂಪಿಸುತ್ತದೆ. ನಾವು ನಿದ್ರಿಸಿದಾಗ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಸರಿಯಾಗಿ ದೃಶ್ಯಗಳು ತೆರೆಯ ಮೇಲೆ ಬಂದ ಹಾಗೆ. ಒಂದು ಚಲನಚಿತ್ರದ ಹಾಗೆ. ಆದರೆ ಅವು ಸರಿಯಾಗಿ ಸಂಕಲನಗೊಂಡಿರುವುದಿಲ್ಲ. ಹಾಗಾಗಿ ಒಂದು ಕಲಸುಮೇಲೋಗರ ಕನಸು ಕಾಣುತ್ತೇವೆ. ಒಂದಕ್ಕೊಂದು ಅರ್ಥವಿಲ್ಲದ ಹಾಗೆ.

ನಿಮಗೆ ಒಂದು ಆಶ್ಚರ್ಯದ ವಿಚಾರ ಗೊತ್ತಾ? ಮನುಷ್ಯ ನಿಜವಾಗಿ ನಿದ್ರಿಸುವುದೇ ಇಲ್ಲ. ಆತ ಕೇವಲ ತನ್ನ ಪ್ರಜ್ಞಾವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾನೆ. ಅಂದರೆ ಜಾಗೃತ ಪ್ರಜ್ಞೆಯಿಂದ ಸುಪ್ತ ಪ್ರಜ್ಞೆಗೆ ಜಾರುತ್ತಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಪ್ನ ಪ್ರಜ್ಞೆಗೆ ಕೂಡ ಜಾರುತ್ತಾನೆ. ಹೇಗೆ ಅಂದಿರಾ? ನಾವು ನಿದ್ರಿಸುತ್ತಿದ್ದರೂ ಸೊಳ್ಳೆ ಕಚ್ಚಿದರೆ ಜಾಗೆಗೆ ಕೈ ತಲುಪಿಸಿ ಸೊಳ್ಳೆಯನ್ನು ಒಡಿಸುತ್ತೇವೆ. ಹಾಗಾದರೆ ನಾವೆಲ್ಲಿ ಮಲಗಿರುತ್ತೇವೆ? ಇನ್ನೊ ಒಂದು ವಿಚಾರ ಹೇಳಲಾ? ಮನುಷ್ಯ ಸಾಯುವುದೇ ಇಲ್ಲ. ಕೇವಲ ತನ್ನ ಜಾಗೃತ ಪ್ರಜ್ಞಾವಸ್ಥೆಯನ್ನು ಹಿಂತೆಗೆದುಕೊಳ್ಳುತ್ತಾನೆ ಅಷ್ಟೇ...

ತಲೆಬುಡವಿರುವುದಿಲ್ಲ ಕನಸುಗಳಿಗೆ. ಕೆಲವೊಮ್ಮೆ ಸುಂದರ ಕನಸುಗಳು ಮತ್ತು ಕೆಲವೊಮ್ಮೆ ಭೀಕರ ಕನಸುಗಳು ನಮ್ಮನ್ನು ಕಾಡುತ್ತವೆ. ಏಕೆ ಹೀಗೆ? ಅದಕ್ಕೆ ಕಾರಣವಿದೆ. ನಮ್ಮ ಸುಪ್ತ ಮನಸು ರೂಪದಲ್ಲಿ ನಮಗೆ ಎಚ್ಚರಿಕೆ ನೀಡುತ್ತದೆ. ಹಾಗಾದರೆ ಸುಪ್ತ ಮನಸು ಎಂದರೇನು? ಇಲ್ಲಿದೆ ವಿವರಣೆ. ಮನುಷ್ಯನ ಮನಸು ಮೊರು ಭಾಗಗಳಾಗಿ ವಿಭಜಿಸಲ್ಪಡುತ್ತದೆ. ಮೊದಲನೆಯದು ಜಾಗೃತ ಮನಸು. ಎರಡನೆಯದು ಸುಪ್ತ ಮನಸು. ಮೊರನೆಯದು ಉನ್ನತ ಮನಸು. ನಿಮಗೆ ಕನಸು ಬಿದ್ದು ಎಚ್ಚರವಾದರೆ ಅದು ಸುಪ್ತ ಮನಸು ಜಾಗೃತ ಮನಸಿಗೆ ನೀಡಿದ ಎಚ್ಚರಿಕೆ ಗಂಟೆ. ಮತ್ತು ಕನಸನ್ನು ನೀವು ಬಹಳ ದಿನ ಮರೆಯಲಾರಿರಿ. ಸುಪ್ತ ಮನಸು ಕೆಲಸ ಮಾಡುವುದೇ ಹೀಗೆ.

ಸುಪ್ತ ಮನಸು ಇದಲ್ಲದೇ ಇನ್ನಿತರ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದೆ. ನಿಮ್ಮ ಉಸಿರಾಟ, ಹೃದಯ ಬಡಿತ, ರಕ್ತ ಚಲನೆ ಇವೆಲ್ಲದರ ಸುಗಮ ಕಾರ್ಯವೈಖರಿಯನ್ನು ನೋಡಿಕೊಳ್ಳುತ್ತದೆ. ನಮಗೆ ಗೊತ್ತಿಲ್ಲದ ಹಾಗೆ ನಾವು ಉಸಿರಾಡುತ್ತಿರುತ್ತೇವೆ.
ಒಂದು ವಿಷಯದ ಮೇಲೆ ನಾವು ಪದೇ ಪದೇ ಅಲೋಚನಾಭರಿತರಾದಾಗ ಅದು ಸುಪ್ತ ಮನಸಿಗೆ ತಿಳಿಯುತ್ತದೆ. ಅದು ವಿಷಯವಾಗಿ ಉನ್ನತ ಮನಸಿಗೆ ಸಂದೇಶ ಕಳುಹಿಸುತ್ತದೆ. ಉನ್ನತ ಮನಸು ಆಲೋಚನೆಗೆ ತಕ್ಕ ಪರಿಹಾರಗಳನ್ನು ಸೂಚಿಸುತ್ತದೆ. ಉನ್ನತ ಮನಸು ಮತ್ತಾವುದೂ ಅಲ್ಲ. ನಮ್ಮ ನಿಮ್ಮೆಲ್ಲರೊಳಗಿರುವ ಭಗವಂತ. ನಾವಾರೂ ಬಯಸಿದರೂ ಅದರಿಂದ ಹೊರ ಬರಲಾರೆವು. ನೆನಪಿಡಿ... ಅಂದಿನಿಂದ ಇಂದಿನವರೆವಿಗೂ ಭೌತ ರೂಪದಲ್ಲಿ ದೇವರು ಎಲ್ಲಿಯೂ ಕಂಡದ್ದಿಲ್ಲ. ಹಾಗೆ ಕಂಡೆನೆಂದು ಹೇಳುವ ಯಾವುದೇ ಡಂಭ ಸನ್ಯಾಸಿಗಳಲ್ಲಿಯೂ ನಂಬಿಕೆ ಇಡಬೇಡಿ. ಅವರು ನೋಡಿದ್ದರೆ ಕೇವಲ ಅವರ ಅಹಂ ಇನ್ನೊಂದು ಮುಖ ಕಂಡಿದ್ದಾರು. ದೇವರು ಹೊರಗೆಲ್ಲೂ ಇಲ್ಲ. ಆತ ನಮ್ಮೊಳಗೆಯೇ ಇದ್ದಾನೆ. ದೇವರು ಎಂಬುದು ನಮ್ಮೊಳಗೆ ಉಂಟಾಗುವ ಒಂದು ಅನುಭೂತಿ.

ಇನ್ನು ಕನಸು...
ನಮ್ಮ ಭೂತ, ವರ್ತಮಾನ, ಭವಿಷ್ಯಗಳ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕನಸನ್ನು ವಿಶ್ಲೇಷಿಸಿ. ನೆನಪಿಟ್ಟುಕೊಳ್ಳಿ. ಕನಸು ಯಾಕೆಂದು ನಿಮ್ಮ ಸುಪ್ತ ಮನಸಿಗೇ ಪ್ರಶ್ನೆ ಹಾಕಿ. ಅದು ಖಂಡಿತ ಉತ್ತರಿಸುತ್ತದೆ. ಪ್ರತಿಯೊಬ್ಬರೂ ಕನಸು ಕಂಡೇ ಕಾಣುತ್ತಾರೆ. ಆದರೆ ಕೆಲವರು ಮಾತ್ರ ನೆನಪಿಟ್ಟುಕೊಳ್ಳುತ್ತಾರೆ. ಕನಸು ಬಿದ್ದೇ ಬೀಳುತ್ತದೆ. ಎಲ್ಲರಿಗೂ. ತಪ್ಪದೇ. "ದಶಾಂಶ ಕೋಶ"ವೆಂಬ ಹೆಸರು ಸೂಚಿಸಿದ್ದು ಕೂಡ ನನಗೆ ಬಿದ್ದ ಕನಸೇ.

ಮನಸೇ ಓ ಮನಸೇ

ಹೀಗೊಂದು ಅನಾವರಣಕ್ಕಾಗಿ ಎಷ್ಟು ಪರಿತಪಿಸಿದೆ... ಗೊತ್ತಿಲ್ಲ... ನನ್ನ ಅಲ್ಪ ಜ್ಞಾನವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕೆನ್ನುವ ಇರಾದೆ
ಇದ್ದದ್ದೇನೋ ನಿಜ... ಆದರೆ ಮನಸು ಕಳ್ಳ ಬೀಳುವುದೇ ಹೆಚ್ಚು...

ಕಳ್ಳ ಬೀಳುವ ಮನಸನ್ನು ಮತ್ತೆ ಗುರಿಯೆಡೆಗೆ ಎಳೆದು ತಂದು ನಿಲ್ಲಿಸುವುದಿದೆಯಲ್ಲ... ಅದೊಂದು ಕಸರತ್ತು... ಮದದಾನೆಯನ್ನು ಪಳಗಿಸುವ ಕೆಲಸ
...

ಅದಕ್ಕೆಂದೇ ಮನಸೇ ಮನಸೇ ಬರೆಯಲು ಕುಳಿತೆ. ಇದು ಸುಲಭದಲ್ಲಿ ಮುಗಿಯುವ ಮಾತಲ್ಲ. ಮನಸಿನ ಬಗ್ಗೆ ಬರೆಯಲು ಕುಳಿತರೆ ಒಂದು ಉದ್ಗ್ರಂಥವೆ ಆಗುವುದೇನೋ
.

ಅತಿರಥ ಮಹರಥರೂ ಕೂಡ ಮನಸಿನ ಬಗ್ಗೆ ಬರೆದು ಬರೆದು ಕೃತಾರ್ಥರಾಗಿ ಹೋಗಿದ್ದಾರೆ... ಮನಸನ್ನು ಮರ್ಕಟಕ್ಕೆ ಹೋಲಿಸಿ ನಿರ್ಲಿಪ್ತರಾದವರೂ ಇದ್ದಾರೆ.

ಇಲ್ಲಿ ನಾನೂ ಕೂಡ ಹಾಗೆ. ಮನಸಿನ ಹೊಡೆತಕ್ಕೆ ಮಹಮಹಿಮರೆಲ್ಲ ಅಡ್ಡಡ್ಡ ಮಲಗಿರುವಾಗ ನಾನೂ ಕೂಡ ಯಾವ ಸೀಮೆಯ ಗಿಡದ ತೊಪ್ಪಲು
?

ಆದರೂ... ನನ್ನ ಅಭಿಪ್ರಾಯ ಮತ್ತು ಜ್ಞಾನದ ಸಾರ ಸಂಗ್ರಹವನ್ನು ನಿಮಗೆ ಉಣಬಡಿಸುವ ತವಕದಲ್ಲಿ ಇದ್ದೇನೆ... ಇದು ನಾನು ಕಂಡದ್ದು ಕೇಳಿದ್ದು ಓದಿದ್ದು ಅನುಭವಿಸಿದ್ದರ ಒಟ್ಟು ಸಾರಾಂಶ ಅಷ್ಟೇ
...

ಓದಿ... ಇಷ್ಟವಾದರೆ... ನನಗೊಂದು ಪತ್ರ ಬರೆಯಿರಿ. ನನ್ನ ವಿ-ಅಂಚೆ mrkotyan@yahoo.com ಗೆ ಓಗಾಯಿಸಿ. ಇಲ್ಲವಾದರೆ ಮರೆತುಬಿಡಿ