Thursday, September 18, 2008

ಕನಸು

ಹೌದು... ಕನಸಿಗು ಮನಸಿಗೂ ಒಂದು ನಂಟು ಇದೆ. ಮನಸಿನಲ್ಲಿ ಬಯಸಿದ್ದು ಕನಸಾಗಿ ಕಾಡುತ್ತದೆ. ಹೇಗೆ? ಪ್ರಶ್ನೆಯಿರುವುದೇ ಅಲ್ಲಿ. ನಮ್ಮ ಪ್ರತಿ ಆಲೋಚನೆಗಳನ್ನೂ ನಮ್ಮ ಸುಪ್ತ ಮನಸು(ಮುಂದೆ ವಿವರಿಸುತ್ತೇನೆ) ಒಂದು ಕಡೆ ಕೂಡಿಡುತ್ತದೆ. ಹೀಗೆ ಕೂಡಿಕೊಂಡ ಎಲ್ಲ ಆಲೋಚನೆಗಳನ್ನೂ
ಸೇರಿಸಿ ಒಂದು ಕಾರ್ಯಕ್ರಮವಾಗಿ ರೂಪಿಸುತ್ತದೆ. ನಾವು ನಿದ್ರಿಸಿದಾಗ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಸರಿಯಾಗಿ ದೃಶ್ಯಗಳು ತೆರೆಯ ಮೇಲೆ ಬಂದ ಹಾಗೆ. ಒಂದು ಚಲನಚಿತ್ರದ ಹಾಗೆ. ಆದರೆ ಅವು ಸರಿಯಾಗಿ ಸಂಕಲನಗೊಂಡಿರುವುದಿಲ್ಲ. ಹಾಗಾಗಿ ಒಂದು ಕಲಸುಮೇಲೋಗರ ಕನಸು ಕಾಣುತ್ತೇವೆ. ಒಂದಕ್ಕೊಂದು ಅರ್ಥವಿಲ್ಲದ ಹಾಗೆ.

ನಿಮಗೆ ಒಂದು ಆಶ್ಚರ್ಯದ ವಿಚಾರ ಗೊತ್ತಾ? ಮನುಷ್ಯ ನಿಜವಾಗಿ ನಿದ್ರಿಸುವುದೇ ಇಲ್ಲ. ಆತ ಕೇವಲ ತನ್ನ ಪ್ರಜ್ಞಾವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾನೆ. ಅಂದರೆ ಜಾಗೃತ ಪ್ರಜ್ಞೆಯಿಂದ ಸುಪ್ತ ಪ್ರಜ್ಞೆಗೆ ಜಾರುತ್ತಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಪ್ನ ಪ್ರಜ್ಞೆಗೆ ಕೂಡ ಜಾರುತ್ತಾನೆ. ಹೇಗೆ ಅಂದಿರಾ? ನಾವು ನಿದ್ರಿಸುತ್ತಿದ್ದರೂ ಸೊಳ್ಳೆ ಕಚ್ಚಿದರೆ ಜಾಗೆಗೆ ಕೈ ತಲುಪಿಸಿ ಸೊಳ್ಳೆಯನ್ನು ಒಡಿಸುತ್ತೇವೆ. ಹಾಗಾದರೆ ನಾವೆಲ್ಲಿ ಮಲಗಿರುತ್ತೇವೆ? ಇನ್ನೊ ಒಂದು ವಿಚಾರ ಹೇಳಲಾ? ಮನುಷ್ಯ ಸಾಯುವುದೇ ಇಲ್ಲ. ಕೇವಲ ತನ್ನ ಜಾಗೃತ ಪ್ರಜ್ಞಾವಸ್ಥೆಯನ್ನು ಹಿಂತೆಗೆದುಕೊಳ್ಳುತ್ತಾನೆ ಅಷ್ಟೇ...

ತಲೆಬುಡವಿರುವುದಿಲ್ಲ ಕನಸುಗಳಿಗೆ. ಕೆಲವೊಮ್ಮೆ ಸುಂದರ ಕನಸುಗಳು ಮತ್ತು ಕೆಲವೊಮ್ಮೆ ಭೀಕರ ಕನಸುಗಳು ನಮ್ಮನ್ನು ಕಾಡುತ್ತವೆ. ಏಕೆ ಹೀಗೆ? ಅದಕ್ಕೆ ಕಾರಣವಿದೆ. ನಮ್ಮ ಸುಪ್ತ ಮನಸು ರೂಪದಲ್ಲಿ ನಮಗೆ ಎಚ್ಚರಿಕೆ ನೀಡುತ್ತದೆ. ಹಾಗಾದರೆ ಸುಪ್ತ ಮನಸು ಎಂದರೇನು? ಇಲ್ಲಿದೆ ವಿವರಣೆ. ಮನುಷ್ಯನ ಮನಸು ಮೊರು ಭಾಗಗಳಾಗಿ ವಿಭಜಿಸಲ್ಪಡುತ್ತದೆ. ಮೊದಲನೆಯದು ಜಾಗೃತ ಮನಸು. ಎರಡನೆಯದು ಸುಪ್ತ ಮನಸು. ಮೊರನೆಯದು ಉನ್ನತ ಮನಸು. ನಿಮಗೆ ಕನಸು ಬಿದ್ದು ಎಚ್ಚರವಾದರೆ ಅದು ಸುಪ್ತ ಮನಸು ಜಾಗೃತ ಮನಸಿಗೆ ನೀಡಿದ ಎಚ್ಚರಿಕೆ ಗಂಟೆ. ಮತ್ತು ಕನಸನ್ನು ನೀವು ಬಹಳ ದಿನ ಮರೆಯಲಾರಿರಿ. ಸುಪ್ತ ಮನಸು ಕೆಲಸ ಮಾಡುವುದೇ ಹೀಗೆ.

ಸುಪ್ತ ಮನಸು ಇದಲ್ಲದೇ ಇನ್ನಿತರ ಕೆಲಸಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿದೆ. ನಿಮ್ಮ ಉಸಿರಾಟ, ಹೃದಯ ಬಡಿತ, ರಕ್ತ ಚಲನೆ ಇವೆಲ್ಲದರ ಸುಗಮ ಕಾರ್ಯವೈಖರಿಯನ್ನು ನೋಡಿಕೊಳ್ಳುತ್ತದೆ. ನಮಗೆ ಗೊತ್ತಿಲ್ಲದ ಹಾಗೆ ನಾವು ಉಸಿರಾಡುತ್ತಿರುತ್ತೇವೆ.
ಒಂದು ವಿಷಯದ ಮೇಲೆ ನಾವು ಪದೇ ಪದೇ ಅಲೋಚನಾಭರಿತರಾದಾಗ ಅದು ಸುಪ್ತ ಮನಸಿಗೆ ತಿಳಿಯುತ್ತದೆ. ಅದು ವಿಷಯವಾಗಿ ಉನ್ನತ ಮನಸಿಗೆ ಸಂದೇಶ ಕಳುಹಿಸುತ್ತದೆ. ಉನ್ನತ ಮನಸು ಆಲೋಚನೆಗೆ ತಕ್ಕ ಪರಿಹಾರಗಳನ್ನು ಸೂಚಿಸುತ್ತದೆ. ಉನ್ನತ ಮನಸು ಮತ್ತಾವುದೂ ಅಲ್ಲ. ನಮ್ಮ ನಿಮ್ಮೆಲ್ಲರೊಳಗಿರುವ ಭಗವಂತ. ನಾವಾರೂ ಬಯಸಿದರೂ ಅದರಿಂದ ಹೊರ ಬರಲಾರೆವು. ನೆನಪಿಡಿ... ಅಂದಿನಿಂದ ಇಂದಿನವರೆವಿಗೂ ಭೌತ ರೂಪದಲ್ಲಿ ದೇವರು ಎಲ್ಲಿಯೂ ಕಂಡದ್ದಿಲ್ಲ. ಹಾಗೆ ಕಂಡೆನೆಂದು ಹೇಳುವ ಯಾವುದೇ ಡಂಭ ಸನ್ಯಾಸಿಗಳಲ್ಲಿಯೂ ನಂಬಿಕೆ ಇಡಬೇಡಿ. ಅವರು ನೋಡಿದ್ದರೆ ಕೇವಲ ಅವರ ಅಹಂ ಇನ್ನೊಂದು ಮುಖ ಕಂಡಿದ್ದಾರು. ದೇವರು ಹೊರಗೆಲ್ಲೂ ಇಲ್ಲ. ಆತ ನಮ್ಮೊಳಗೆಯೇ ಇದ್ದಾನೆ. ದೇವರು ಎಂಬುದು ನಮ್ಮೊಳಗೆ ಉಂಟಾಗುವ ಒಂದು ಅನುಭೂತಿ.

ಇನ್ನು ಕನಸು...
ನಮ್ಮ ಭೂತ, ವರ್ತಮಾನ, ಭವಿಷ್ಯಗಳ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕನಸನ್ನು ವಿಶ್ಲೇಷಿಸಿ. ನೆನಪಿಟ್ಟುಕೊಳ್ಳಿ. ಕನಸು ಯಾಕೆಂದು ನಿಮ್ಮ ಸುಪ್ತ ಮನಸಿಗೇ ಪ್ರಶ್ನೆ ಹಾಕಿ. ಅದು ಖಂಡಿತ ಉತ್ತರಿಸುತ್ತದೆ. ಪ್ರತಿಯೊಬ್ಬರೂ ಕನಸು ಕಂಡೇ ಕಾಣುತ್ತಾರೆ. ಆದರೆ ಕೆಲವರು ಮಾತ್ರ ನೆನಪಿಟ್ಟುಕೊಳ್ಳುತ್ತಾರೆ. ಕನಸು ಬಿದ್ದೇ ಬೀಳುತ್ತದೆ. ಎಲ್ಲರಿಗೂ. ತಪ್ಪದೇ. "ದಶಾಂಶ ಕೋಶ"ವೆಂಬ ಹೆಸರು ಸೂಚಿಸಿದ್ದು ಕೂಡ ನನಗೆ ಬಿದ್ದ ಕನಸೇ.

No comments: