ಆಕರ್ಷಣೆ...
ಏನಿದು? ಮನಸಿನ ಬಗ್ಗೆ ಬರೆಯುವುದು ಬಿಟ್ಟು ಈ ಶೀರ್ಷಿಕೆ ಯಾಕೆ ಎಂದಿರಾ? ಈ ಮನಸಿಗೂ ಆಕರ್ಷಣೆಗೂ ಎಲ್ಲಿಲ್ಲದ ನಂಟು... ಹೇಗೆ? ವಿವರಿಸುತ್ತಾ ಹೋಗುತ್ತೇನೆ... ಮನಸು... ಎಲ್ಲಿದೆ? ಈ ಭೌತ ಶರೀರದಲ್ಲಿ ಎಲ್ಲಿ ಕಾಣಸಿಗುತ್ತದೆ? ಎಲ್ಲಿಯೂ ಇಲ್ಲ...
ಹಾಗಾದರೆ ನಮ್ಮನ್ನೆಲ್ಲ ಹಿಂಡಿ ಹಿಪ್ಪೆ ಮಾಡುವ ಈ ಮನಸು ನಮ್ಮೊಳಗಿಲ್ಲ... ಅಂದರೆ ಮತ್ತೆಲ್ಲಿದೆ?
ವಿಜ್ಞಾನಿಗಳ ಪ್ರಕಾರ ಅದು ನಾವೆಲ್ಲಿ ನೋಡುತ್ತಿರುವೆವೋ ಏನನ್ನು ನೋಡುತ್ತಿರುವೆವೋ ಅಲ್ಲಿದೆ. ತಮಾಷೆ ನೋಡಿ...
ನಮ್ಮೊಳಗಿಲ್ಲದ ಒಂದು ನಮ್ಮೊಳಗನ್ನು ಮತ್ತು ನಮ್ಮ ಹೊರಗನ್ನು ಹೇಗೆ ಅಧ್ವಾನ ಮಾಡಬಲ್ಲುದು ಹಾಗೂ ಪ್ರಧಾನ ಮಾಡಬಲ್ಲುದು...
ವಿಪರ್ಯಾಸವೆಂದರೆ... ನಾವು ಮನಸಿನಲ್ಲಿ ಆಲೋಚಿಸಿದ್ದೆಲ್ಲಾ ನಮ್ಮದಲ್ಲವೇ ಅಲ್ಲ... ಅದು ಹೊರಗಿನದ್ದು...
ಅಧ್ಯಾತ್ಮಿಕವಾಗಿ ವಿವರಿಸುವುದಾದರೆ... ನಮ್ಮ ಭೌತ ಶರೀರಕ್ಕೆ ಒಂದು ಹೊರಮೈ ಇದೆ. ಅದೇ ಆಕಾಶ ಶರೀರ... ದೇಹದ ಸುತ್ತಲು ಒಂದು ಬೆಳಕಿನ ರೇಖೆ ಹೊಮ್ಮಿದ ಹಾಗೆ... ಈ ಆಕಾಶ ಶರೀರಕ್ಕೆ ಬಂದು ಈ ಆಲೋಚನೆಗಳು ತಾಕುತ್ತವೆ...
ತಾಕಿದ್ದು ಮನಸಿಗೆ ತಿಳಿಯುತ್ತದೆ... ಮನಸು ಆಲೋಚನೆಗೊಳಗಾಗುತ್ತದೆ... ನಮಗೆ ತಿಳಿಯುವುದೇ ಇಲ್ಲ... ಅಷ್ಟು ದುರ್ಬಲರು ನಾವು...
ಸಿನೆಮಾ.. ಎಂದು ಆಲೋಚನೆ ಮೂಡಿದ ಕೂಡಲೇ ಉಳಿದೆಲ್ಲ ನಮ್ಮ ಕಣ್ಣ ಮುಂದೆ ಸುಳಿಯತೊಡಗುತ್ತವೆ...
ಯಾವ ಚಿತ್ರ? ಯಾವ ಚಿತ್ರಮಂದಿರ? ಯಾವ ಪ್ರದರ್ಶನ? ಎಷ್ಟು ಜನ ಹೋಗುವುದು? ಎಷ್ಟು ಗಂಟೆಗೆ ಹೊರಡುವುದು? ನಡುವೆ ಏನು ತಿನ್ನುವುದು? ಎಲ್ಲಿ ತಿನ್ನುವುದು?
ಟಿಕೇಟು ಸಿಗದಿದ್ದರೆ ಏನು ಮಾಡುವುದು?
ಹುಡುಗ ಹುಡುಗಿ ಇಬ್ಬರೇ ಆದರೆ ಯಾವ ಸಾಲು... ಯಾವ ಸಾಲು ಸುರಕ್ಷಿತ?
ಹೀಗೆ... ಒಂದು ಆಲೋಚನೆಗೆ ನೂರು ಆಯಾಮಗಳು ದೊರಕುತ್ತವೆ...
ಇರಲಿ... ಈಗ ಆಕರ್ಷಣೆಯ ವಿಚಾರ ಮಾಡೋಣ. ಜಗತ್ತಿನಲ್ಲಿ ಒಂದು ನಿಯಮವಿದೆ.
ಜಗತ್ತು ಆ ನಿಯಮದ ಪ್ರಕಾರವೇ ನಡೆಯುತ್ತದೆ. ಇನಿತೂ ತಪ್ಪುವುದಿಲ್ಲ...
ಅದುವೇ ಆಕರ್ಷಣೆಯ ನಿಯಮ. ಇಂದು ನೀವು ಒಂದು ವಾಹನ ಕೊಂಡುಕೊಳ್ಳಬೇಕು ಎಂದುಕೊಂಡಿರಿ.
ಮರುದಿನವೋ, ಮರುವಾರವೋ, ಮರು ತಿಂಗಳೋ, ಮರುವರ್ಷವೋ ನಿಮ್ಮ ಅನಿಸಿಕೆಯನ್ನು ನಿಜ ಮಾಡಿದಿರಿ.
ಅಂದರೆ... ನೀವು ಅಂದುಕೊಳ್ಳುವುದಕ್ಕೂ ಅಂದುಕೊಂಡಿದ್ದು ನಿಜವಾಗುವುದಕ್ಕೂ ನಡುವೆ ಏನೇನು ಮಾಡಿದಿರಿ?
ಬಹಳಷ್ಟು ಜನಕ್ಕೆ ನೆನಪಿರುವುದಿಲ್ಲ. ಅವರು ಅಂದುಕೊಂಡ ಸಮಯದಿಂದ ಕೊಂಡುಕೊಳ್ಳುವ ಸಮಯದವರೆವಿಗೂ
ಅದರ ಬಗ್ಗೆಯೇ ಕನಸು ಕಾಣುತ್ತಿರುತ್ತಾರೆ.
ಕಲ್ಪನೆ ಮಾಡಿಕೊಳ್ಳುತ್ತಾರೆ. ಅವರಿಗೇ ತಿಳಿಯದ ಹಾಗೆ ಅವರ ಅನಿಸಿಕೆಗೆ, ಕನಸಿಗೆ, ಕಲ್ಪನೆಗೆ ಜೀವ ತುಂಬುತ್ತಾರೆ.
ಅದನ್ನೊಂದು ನಂಬಿಕೆಯಾಗಿ ಪರಿವರ್ತಿಸುತ್ತಾರೆ.
ಅದನ್ನೊಂದು ಶಕ್ತಿಯಾಗಿ ಬದಲಾಯಿಸುತ್ತಾರೆ. ಅಷ್ಟು ಸಾಕು. ಅವರ ಅನಿಸಿಕೆ ನಿಜವಾಗಲು.
ಅವರ ಅನಿಸಿಕೆ ವಿಶ್ವದ ಅಂತಹುದೆ ಅನಿಸಿಕೆಗಳೊಂದಿಗೆ ಬೆರೆಯುತ್ತದೆ.
ಅದೊಂದು ಕಂಪನವಾಗಿ ಮಾರ್ಪಡುತ್ತದೆ.
ಆ ಕಂಪನವು ತನ್ಮೂಲಕ ಅದಕ್ಕೆ ಸಂಬಂಧಿಸಿದ ಹಾಗೆ
ವ್ಯಕ್ತಿಗಳನ್ನು, ಸನ್ನಿವೇಶವನ್ನು, ಪರಿಸ್ಥಿತಿಯನ್ನು ಉಂಟುಮಾಡುತ್ತದೆ.
ಹೀಗೆ ಯಾರೋ ನಿಮ್ಮ ಸಹಾಯಕ್ಕೆ ಬರುತ್ತಾರೆ. ಬ್ಯಾಂಕು ಸಾಲ ಕೊಡುತ್ತದೆ.
ನಿಮಗೆ ಎಲ್ಲಿಂದಲೋ ಹೇಗೋ ಹಣ ಒದಗಿ ಬರುತ್ತದೆ.
ಇದನ್ನೇ "ಆಕರ್ಷಣೆಯ ನಿಯಮ" ಎನ್ನುತ್ತಾರೆ.
No comments:
Post a Comment