Thursday, September 18, 2008

ಹಣ

ಹಣ...

ಬಡವರ ಜಗತ್ತು ಪದ ಕಿವಿಗೆ ಬಿದ್ದೊಡನೆ ಬೆಚ್ಚಿ ಬೀಳುತ್ತದೆ. ಚಡಪಡಿಸುತ್ತದೆ. ಹಣ ಸಂಪಾದಿಸಲು ಶತ ಪ್ರಯತ್ನಗಳನ್ನು ಮಾಡುತ್ತದೆ. ಆದರೆ ಸೋತು ಕೈ ಚೆಲ್ಲುತ್ತದೆ. ಹಣ ನಮಗೆ ಆಗಿ ಬರೋಲ್ಲ, ಅದೇನಿದ್ದರೂ ಬಲ್ಲಿದರ, ಎಂದಿದ್ದರೂ ಶ್ರೀಮಂತರ ಸೊತ್ತು ಎಂದು ನಿರ್ಧರಿಸಿಬಿಡುತ್ತದೆ.. ಅವರ ಹಣದ ಬಗೆಗಿನ ಭಾವನೆಗಳು ಬೇರೆಯದೇ ತೆರನಾಗಿರುತ್ತವೆ. ಹಣಕ್ಕೂ ಮನಸಿಗೂ ಯಾವ ನಂಟು ಎಂದಿರಾ? ಇದೆ. ಹಣಕ್ಕೂ ಮನಸಿಗೂ ನಂಟು ಇದೆ. ಹಣವನ್ನು ಹೇಗಾದರೂ ಸಂಪಾದಿಸಬೇಕೆಂಬ ಮನಸಿನ ಆಲೋಚನೆಯೇ ಇಲ್ಲಿ ಪ್ರಸ್ತುತ.

ಯಾಕೆ ಹೀಗೆ?

ಅದಕ್ಕೆ ಕಾರಣವಿದೆ. ಗಮನಿಸಿ. ನಾವು ಚಿಕ್ಕವರಿದ್ದಾಗಿಂದಲೂ ಹಣದ ಪ್ರಸ್ತಾಪವಾದಾಗಲೆಲ್ಲ ಅದರ ಕೊರತೆಯ ಬಗ್ಗೆಯೇ ಚರ್ಚಿಸಿರುತ್ತೇವೆ. ದುಡ್ಡು ಎಂದಾಗ ಮನೆಯಲ್ಲಿ ಎಲ್ಲರ ಮುಖಚಹರೆಯೇ ಬದಲಾಗಿಬಿಡುತ್ತದೆ. ದುಡ್ಡು ಮರದ ಮೇಲೆ ಬೆಳೆಯುತ್ತಾ? ದುಡ್ಡು ಯಾರತ್ರ ಇದೆ? ಹೇಗೋ ಹೊಂದಿಕೊಂಡು ಹೋಗು... ಹೀಗೆ ನಾನಾ ಕಾರಣ ಕೊಟ್ಟು ಹಣದ ಕೊರತೆಯನ್ನೇ ದೊಡ್ಡದು ಮಾಡುತ್ತಾರೆ. ಅಲ್ಲಿಗೆ ಮುಗಿಯಿತು. ನಾವು ಬೆಳೆದು ದೊಡ್ಡವರಾದ ಮೇಲೂ ಹಣದ ಆಲೋಚನೆ ಮಾಡಿದಾಗಲೆಲ್ಲ ಅದರ ಕೊರತೆಯ ಬಗ್ಗೆಯೇ ಯೋಚನೆ ಮಾಡಿರುತ್ತೇವೆ. ಅಂದರೆ ನಮಗಾರಿಗೂ ಹಣದ ವಿಪುಲತೆಯ ಆಲೋಚನೆ ಮಾಡಲಾಗುವುದೇ ಇಲ್ಲ. ಏಕೆಂದರೆ ಮನೆಯಲ್ಲಿ ಅಂತಹ ವಾತಾವರಣ ಏರ್ಪಡುವುದೇ ಇಲ್ಲ.

ಆದರೆ ಬಲ್ಲಿದರ, ಶ್ರೀಮಂತರ ಮನೆಗಳಲ್ಲಿ ಹಾಗಲ್ಲ. ಅಲ್ಲಿ ಹಣದ ವಿಪುಲತೆಯ ಬಗ್ಗೆ ಚರ್ಚೆಯಾಗುತ್ತದೆ. "ಚೆನ್ನಾಗಿ ಓದು, ಒಳ್ಳೇ ಕಂಪನಿಯಲ್ಲಿ ಕೆಲಸ ಸಿಗುತ್ತೆ." ಅಂತಾನೆ ಬಡ ಅಪ್ಪ. ಆದರೆ ಶ್ರೀಮಂತ ಅಪ್ಪ 'ಚೆನ್ನಾಗಿ ಓದೋ, ಒಳ್ಳೇ ಕಂಪನಿಯನ್ನು ಕೊಂಡುಕೋಬಹುದು". ಅಂತಾನೆ. ಅಂದರೆ ನಮ್ಮ ಆಲೋಚನೆಯೇ ನಮ್ಮ ಬಡತನಕ್ಕೆ ಕಾರಣವೇ? ಅಕ್ಷರಶಃ ಹೌದು!

ಬಡವನಾರ್? ಮಡದಿಯೊಲವಿನ ಸವಿಯನರಿಯದವನ್,
ಚಿಣ್ಣರಾಟದಿ ಬೆರೆತು ನಗಲರಿಯದವನ್,
ಉಡುರಾಜನೋಲಗದಿ ಕುಳಿತು ಮೈಮರೆಯದವನ್,
ಬಡಮನಸೆ ಬಡತನವೋ ಮರುಳ ಮುನಿಯ

ಎಂದು ಡಿವಿಜಿಯವರು ಸೊಗಸಾಗಿ ತಮ್ಮ ಮರುಳ ಮುನಿಯನ ಕಗ್ಗದಲ್ಲಿ ಬರೆಯುತ್ತಾರೆ. ಮನಸಿನ ಆಲೋಚನೆಗಳು ಬಡವಾದರೆ ಬದುಕಿಗೂ ಬಡತನ ಖಂಡಿತ. ನಿಮ್ಮ ಆಲೋಚನೆಗಳನ್ನು ವಿಸ್ತಾರಗೊಳಿಸಿ. ಬೃಹತ್ತಾಗಿಸಿ. ಆಲೋಚಿಸಿ... ಶ್ರೀಮಂತರಾಗಿ... ಹೇಗೆ? ನೆಪೋಲಿಯನ್ ಹಿಲ್ ಬರೆದ "ಥಿಂಕ್ ಅಂಡ್ ಗ್ರೋ ರಿಚ್" ಓದಿ. ಅದು ಕನ್ನಡದಲ್ಲೂ ಅನುವಾದಿತವಾಗಿದೆ.

ಒಂದು ಉಪಾಯ ಹೇಳಲಾ?

ನಿಮ್ಮ ಕಿಸೆಯಲ್ಲೋ ಹಣದ ಥೈಲಿಯಲ್ಲೋ ರೂ. ೫೦೦/- ಗರಿಗರಿ ನೋಟು ಇಟ್ಟುಕೊಳ್ಳಿ. ಅದನ್ನು ಖರ್ಚು ಮಾಡದಿರಲು ನಿರ್ಧರಿಸಿ. ಪೇಟೆಯಲ್ಲಿ ಮುಂದೆ ಸಾಗುತಾ ಸಾಗುತ್ತಾ ಕಣ್ಣಿಗೆ ಬೀಳುವ ಇಷ್ಟದ ವಸ್ತುಗಳ ಮೇಲೆ ಕಣ್ಣು ಹಾಯಿಸಿ. ನನ್ನಲ್ಲಿ ಹಣವಿದೆ, ಇದನ್ನು ಕೊಂಡು ಕೊಳ್ಳಬಹುದು ಎಂದುಕೊಳ್ಳಿ.
ಕೊಂಡುಕೊಳ್ಳಬೇಡಿ. ಹಾಗಂದುಕೊಳ್ಳಿ ಅಷ್ಟೇ. ಹೀಗೆ ಕಣ್ಣಿಗೆ ಬಿದ್ದ ಇಷ್ಟ ಪಟ್ಟ ವಸ್ತುಗಳನ್ನು ಮನಸಿನಲ್ಲಿಯೇ "ನನ್ನ ಬಳಿ ಹಣವಿದೆ. ಇದನ್ನು ಕೊಳ್ಳಬಹುದು." ಎಂದುಕೊಳ್ಳುತ್ತಾ ಹೋಗಿ.
ಪ್ರತಿ ಬಾರಿ ಹಾಗಂದುಕೊಳ್ಳುತ್ತಲೇ ಥೈಲಿಯಲ್ಲಿರುವ ಹಣದ ಬಗ್ಗೆ ಗಮನವಿಡಿ. ನಿಮ್ಮಲ್ಲಿ ಹಣವಿದ್ದಾಗ ಒಂದು ರೀತಿಯ ಭದ್ರತಾ ಭಾವನೆ ಇರುತ್ತದೆ. ಭಾವನೆಯನ್ನು ಉಳಿಸಿಕೊಳ್ಳಿ.

ದಿನಕ್ಕೆ
ಹಾಗೆ ಸುಮಾರು ೧೫ ಸಾವಿರ ರೂಪಾಯಿಗಳಷ್ಟು ಮಾನಸಿಕ ಖರೀದಿ ನಡೆಸಿ. ಹೀಗೇ ಕೆಲ ದಿನ ಮಾಡಿ. ಆಗ ನೋಡಿ. ನಿಮ್ಮ ಕೊರತೆಯೆಂಬ ಮನಸ್ತತ್ವ ಮಾಯವಾಗಿ ಜಾಗಕ್ಕೆ ವಿಪುಲತೆ ಬಂದು ಕೂಡುತ್ತದೆ. ಏಕೆಂದರೆ ನೀವು ಪ್ರತಿ ಬಾರಿ ಹಣವಿದೆ, ನನ್ನಲ್ಲಿ ಹಣವಿದೆ ಎಂದು ಅಂದುಕೊಂಡಾಗ ಅದು
ಸುಪ್ತ ಮನಸಿನಲ್ಲಿ ಅಚ್ಚಾಗಿ ನಿಲ್ಲುತ್ತದೆ. ಯಥಾ ಪ್ರಕಾರ ಸುಪ್ತ ಮನಸು ವಿಷಯವನ್ನು ಉನ್ನತ ಮನಸಿಗೆ ರವಾನಿಸುತ್ತದೆ. ಉನ್ನತ ಮನಸು ಅದಕ್ಕೆ ಬೇಕಾದ ಏರ್ಪಾಟು ಮಾಡುತ್ತದೆ.

ನಿಮಗೆ ಅರಿವಿಲ್ಲದ ಹಾಗೆ ಎಲ್ಲೆಲ್ಲಿಂದಲೋ ಹಣ ಒದಗಿ ಬರುತ್ತದೆ. ಆಶ್ಚರ್ಯವಾಗುವ ರೀತಿಯಲ್ಲಿ ಬರುತ್ತದೆ. ನಿಮ್ಮ ಬಳಿಗೆ ಅಪಾರ ಹಣ ಬೇರೆ ಬೇರೆ ರೀತಿಯಲ್ಲಿ ಬಂದು ತಲುಪುತ್ತದೆ. ಬೇಕಾದರೆ ಪರೀಕ್ಷಿಸಿ ನೋಡಿ.

No comments: